ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಅವರು ಆಂಗ್ಲ ಕಾದಂಬರಿಗಾರ್ತಿ, ಪ್ರವಾಸ ಕಥನ ಬರಹಗಾರ್ತಿ ಮತ್ತು ಖ್ಯಾತ ಕವಿಯತ್ರಿ. ಇವರು ಫ್ರಾನ್ಸ್‌ನ ಇತಿಹಾಸ, ಭಾಷೆ, ಸಂಸ್ಕೃತಿ ಸೇರಿದಂತೆ ಆ ದೇಶದ ಹಲವಾರು ವಿಷಯಗಳಲ್ಲಿ ಪರಿಣಿತರು. ಇವರು ಹಲವಾರು ಮಕ್ಕಳ ಪುಸ್ತಕಗಳನ್ನೂ ಕೂಡ ಬರೆದಿದ್ದಾರೆ. == ಜೀವನ ಚರಿತ್ರೆ == ಇವರು ೪ ಮಾರ್ಚ್ ೧೮೩೬ ರಲ್ಲಿ ಇಪ್ಸ್ವಿಚ್‌ನ ವೆಸ್ಟರ್ ಫೀಲ್ಡ್ ನಲ್ಲಿ ಜನಿಸಿದರು. ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಅವರು ಎಡ್ವರ್ಡ್ಸ್ ಮತ್ತು ಬರ್ಬರಾ ದಂಪತಿಗಳ ನಾಲ್ಕನೇ ಮಗಳು. ಇವರ ತಂದೆ ಇಪ್ಸ್ವಿಚ್‌ನ ವೆಸ್ಟರ್ ಫೀಲ್ಡ್ ನಲ್ಲಿ ಕೃಷಿಕರಾಗಿದ್ದರು. ಇವರು ಅಲ್ಲೇ ತಮ್ಮ ಬಾಲ್ಯವನ್ನು ಕಳೆದರು. ಇವರು ತಮ್ಮ ಹತ್ತನೇ ವಯಸ್ಸಿನವರೆಗೂ ತಮ್ಮಷ್ಟಕ್ಕೆ ತಾವೇ ಕಲಿಯ ತೊಡಗಿದರು. ನಂತರ ಇಪ್ಸ್ವಿಚ್ ನಲ್ಲಿ ಶಾಲೆಗೆ ಸೇರಿದರು. ಅಲ್ಲಿ ಶಿಕ್ಷಕರು, ತಮ್ಮ ಆಸಕ್ತಿಯನ್ನು ಕಂಡು ಟೀಕೆ ಮಾಡತೊಡಗಿದರು. ಆದರೂ ಇವರು ಬೇಸರಪಟ್ಟುಕೊಳ್ಳದೆ ಓದಿನಲ್ಲಿ ಮುಂದುವರೆಯ ತೊಡಗಿದರು. ಇವರ ಮೊದಲ ಕಾದಂಬರಿ, 'ದ ವೈಟ್ ಹೌಸ್ ಬೈ ದ ಸಿ' (೧೮೫೭) ಅಲ್ಪಾವಧಿಯಲ್ಲೇ ಯಶಸ್ಸನ್ನು ಕಂಡು ಹಲವಾರು ಬಾರಿ ಮರುಮುದ್ರವಾಗಿದೆ. ಅಲ್ಲದೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ೪೦ ವರ್ಷಗಳ ಕಾಲ ಮುದ್ರಣಗೊಂಡಿದೆ. ಇವರು ವಿದೇಶಗಳಲ್ಲಿ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನು ಕಲಿತು ನಂತರ ತಮ್ಮ ಸೋದರಿಯ ಜೊತೆ ತಮ್ಮ ತಂದೆಯ ಜಮೀನನ್ನು ನೋಡಿಕೊಳ್ಳಲು ಸುಫ್ಫೋಲ್ಕ್‌ನಲ್ಲಿ ನೆಲೆಸಿದರು. ಈ ರೀತಿ ಗ್ರಾಮೀಣ ವೃತ್ತಿಯಲ್ಲಿ ತೊಡಗಿಕೊಂಡ ನಂತರ ಚಾರ್ಲ್ಸ್ ಡಿಕೆನ್ಸ್‌ನ ಸ್ನೇಹ ಬೆಳೆದು ಅವರ 'ಹೌಸ್ ಹೋಲ್ಡ್ ವರ್ಡ್ಸ್' ಎಂಬ ಪತ್ರಿಕೆಗೆ ತಮ್ಮ ಬರಹವನ್ನು ನೀಡಿದರು. ತಮ್ಮ ಸಹೋದರಿಯ ಮರಣದ ನಂತರ, ಅವರು ಲಂಡನ್‌ಗೆ ತೆರಳಿದರು ಮತ್ತು ಫ್ರಾನ್ಸ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಪ್ರಾಂತೀಯ ಫ್ರೆಂಚ್ ಮನೆಗಳ ಬಗ್ಗೆ ಅವರ ನಿಕಟ ಜ್ಞಾನದಿಂದ, ಮಕ್ಕಳ ಪುಸ್ತಕಗಳು ಮತ್ತು ಫ್ರಾನ್ಸ್‌ನ ಬಗ್ಗೆ ಕಾಲ್ಪನಿಕವಲ್ಲದ ಪುಸ್ತಕಗಳ ಆಧಾರದ ಮೇಲೆ ಫ್ರೆಂಚ್ ಜೀವನದ ಹಲವಾರು ಕಾದಂಬರಿಗಳನ್ನು ಬರೆದರು. ಅವನ್ನು ಜಾರ್ಜ್ ಮತ್ತು ರಿಚರ್ಡ್ ಬೆಂಟ್ಲಿ ಪ್ರಕಟಿಸಿದರು. ಅವರು ಸ್ತ್ರೀವಾದಿ ಶಿಕ್ಷಣತಜ್ಞ ಬಾರ್ಬರಾ ಬೋಡಿಚನ್ ಅವರೊಂದಿಗೆ ಅಲ್ಜೀರಿಯಾದಲ್ಲಿ ಉಳಿದುಕೊಂಡರು ಮತ್ತು ಅವರೊಂದಿಗೆ ಫ್ರಾನ್ಸ್ ಮತ್ತು ಸ್ಪೇನ್‌ಗೆ ಭೇಟಿ ನೀಡಿದರು. ಇವರು ಫ್ರಾನ್ಸ್ ಅನ್ನು ತಮ್ಮ ಎರಡನೇ ಸ್ಥಳೀಯ ಭೂಮಿ ಎಂದು ಪರಿಗಣಿಸಿದರು ಮತ್ತು ಈ ಎರಡು ದೇಶಗಳ ನಡುವೆ ಉತ್ತಮ ತಿಳುವಳಿಕೆ ಮತ್ತು ಸಹಾನುಭೂತಿಯನ್ನು ತರಲು ಪ್ರಯತ್ನಿಸಿದರು. ಈ ರೀತಿಯಾಗಿ, ಇಂಗ್ಲಿಷ್ ಮತ್ತು ಫ್ರೆಂಚ್ ಜನರ ನಡುವೆ ಉತ್ತಮ ಸಂಬಂಧ ಬೆಳೆಯಲು ಅವರು ಪ್ರೇರಣೆಯಾದರು. ಎರಡು ದೇಶಗಳ ನಡುವೆ ನಿಜವಾದ ಮತ್ತು ಶಾಶ್ವತವಾದ ಗೆಳೆತನವನ್ನು ಮೂಡಿಸುವ ಕಡೆಗೆ ಅವರ ಅವಿರತ ಪ್ರಯತ್ನಗಳನ್ನು ಗುರುತಿಸಿ ಫ್ರೆಂಚ್ ಸರ್ಕಾರವು ಅವರನ್ನು 'ಡೆ ಎಲ್'ಇನ್ಸ್ಟ್ರಕ್ಷನ್ ಪಬ್ಲಿಕ್ ಡೆ ಫ್ರಾನ್ಸ್' ಎಂದು ಗುರುತಿಸಿತು. ಫ್ರಾಂಕೋ-ಬ್ರಿಟಿಷ್ ಪ್ರದರ್ಶನದಲ್ಲಿ (೧೯೦೮) ಅವರಿಗೆ ಪದಕವನ್ನು ನೀಡಲಾಯಿತು. ಬೆಥಮ್-ಎಡ್ವರ್ಡ್ಸ್ ಅವರನ್ನು ಹೆಚ್ಚಾಗಿ ಸಲಿಂಗಕಾಮದ ಕವನ ಸಂಕಲನಗಳಲ್ಲಿ ಉಲ್ಲೇಖಿಸಲಾಗಿದೆ. ಅವರು ೪ನೇ ಜನವರಿ ೧೯೧೯ರಲ್ಲಿ ಯುನೈಟೆಡ್ ಕಿಂಗ್ ಡಮ್‌ನ ಹ್ಯಾಸ್ಟಿಂಗ್ಸ್‌ನಲ್ಲಿ ಮರಣ ಹೊಂದಿದರು. ಪ್ರೊಫೆಸರ್ ಜೋನ್ ರೀಸ್ ಅವರು ೨೦೦೬ ರಲ್ಲಿ ಮಟಿಲ್ಡಾ ಬೆಥಮ್-ಎಡ್ವರ್ಡ್ಸ್ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. == ಸಾಹಿತ್ಯ ಕೊಡುಗೆಗಳು == ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಅವರು ತಮ್ಮ ಸೋದರಿಯ ಮರಣದ ನಂತರ ಇವರು ಲಂಡನ್ ಗೆ ತೆರಳಿದರು. ನಂತರ ಅಲ್ಲಿ, ಸಾಹಿತ್ಯ ಕ್ಷೇತ್ರದ ಹಲವಾರು ಪ್ರಮುಖರನ್ನು ಭೇಟಿಯಾದರು. ಅವರಲ್ಲಿ ಕೆಲವರೆಂದರೆ, ಹೆನ್ರಿ ಜೇಮ್ಸ್, ಫ್ರೆಡರಿಕ್ ಹ್ಯಾರಿಸನ್, ಕ್ಲೆಮೆಂಟ್ ಶೋರ್ಟರ್, ಕೋವೆಂಟ್ರಿ ಪ್ಯಾಟ್ ಮೋರ್, ಸಾರಾ ಗ್ರ್ಯಾಂಡ್ ಮತ್ತಿತರರು. ಅವರು ಬರೆದ 'ಕಿಟ್ಟಿ' ಎಂಬ ಕೃತಿಯನ್ನು ಲಾರ್ಡ್ ಬ್ರಟೋನ್ ಅವರು ಉತ್ತಮ ಕೃತಿಯೆಂದು ಹೊಗಳಿದ್ದಾರೆ. ಅಲ್ಲದೆ, ಫ್ರೆಡರಿಕ್ ಹ್ಯಾರಿಸನ್ ಅವರು 'ಕಿಟ್ಟಿ', 'ಡಾಕ್ಟರ್ ಜೇಕಬ್' ಮತ್ತು 'ಜಾನ್ ಅಂಡ್ ಐ' ಕೃತಿಗಳನ್ನು ಹೊಗಳಿದ್ದಾರೆ. ತಮ್ಮ ಫ್ರಾನ್ಸ್ ನ ಭೇಟಿ ಮತ್ತು ಜೀವನದ ಬಗ್ಗೆ ಹಲವಾರು ಕಾದಂಬರಿಗಳನ್ನು, ಮಕ್ಕಳ ಪುಸ್ತಕಗಳನ್ನು ಬರೆದಿದ್ದಾರೆ. ನಂತರ ಇವರು ಸ್ತ್ರೀವಾದಿಯಾದ ಬಾರ್ಬರ ಬೋಡಿಕೋನ್ ಜೊತೆ ಅಲ್ಗೇರಿಯಾದಲ್ಲಿ ನೆಲೆಸಿ ಫ್ರಾನ್ಸ್ ಮತ್ತು ಸ್ಪೇನ್ ಗೆ ಭೇಟಿ ನೀಡಿದರು.ಇವರು ತಮ್ಮ ೬೦ನೇ ವಯಸ್ಸಿನಲ್ಲಿ ಹಲವಾರು ವಾರಪತ್ರಿಕೆಗಳಿಗೆ ಲೇಖನಗಳು,ಸಣ್ಣ ಕಥೆಗಳು ,ಕಾದಂಬರಿಗಳು,ಕವಿತೆಗಳು,ಮಕ್ಕಳ ಪುಸ್ತಕಗಳು,ಪ್ರವಾಸ ಕಥನಗಳು ಮತ್ತು ಫ್ರಾನ್ಸ್‌ನ ಬಗ್ಗೆ ಬರೆಯುತ್ತಿದ್ದರು. ತಾವು ಬರೆದ ಕೃತಿಗಳಿಂದ ಜನರು ಅವರನ್ನು ಗುರುತಿಸುತ್ತಾರೆಂದು ಅವರು ನಂಬಿದ್ದರು. ಅಲ್ಲದೇ ಅವರಿಗೆ 'ಫೋರ್ ಸ್ಟಾಲ್ಡ್'(೧೮೮೦) ಮತ್ತು 'ಲವ್ ಅಂಡ್ ಮ್ಯಾರೇಜ್'(೧೮೮೪)ಕೃತಿಗಳು ಬಲು ಪ್ರಿಯವಾದವುಗಳಾಗಿದ್ದವು. == ಕೃತಿಗಳು == == ಉಲ್ಲೇಖಗಳು == == ಬಾಹ್ಯ ಸಂಪರ್ಕ == ವಿಕಿಮೀಡಿಯಾ ಕಾಮನ್ಸ್‌ನಲ್ಲಿ ಮಟಿಲ್ಡಾ ಬೆಥಮ್-ಎಡ್ವರ್ಡ್ಸ್ ಗೆ ಸಂಬಂಧಿಸಿದ ಮಾಧ್ಯಮ ಪ್ರೊಫೆಸರ್ ಜೋನ್ ರೀಸ್ ಅವರಿಂದ ಮಟಿಲ್ಡಾ ಬೆಥಮ್ ಎಡ್ವರ್ಡ್ಸ್ ಜೀವನಚರಿತ್ರೆ ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಲ್ಲಿ ಮಟಿಲ್ಡಾ ಬೆಥಮ್-ಎಡ್ವರ್ಡ್ಸ್ ಅವರ ಕೃತಿಗಳು ಇಂಟರ್ನೆಟ್ ಆರ್ಕೈವ್‌ನಲ್ಲಿ ಮಟಿಲ್ಡಾ ಬೆಥಮ್-ಎಡ್ವರ್ಡ್ಸ್ ಅವರ ಕೆಲಸಗಳು